ಒಗೆಯುವ ಯಂತ್ರ: ಬಟ್ಟೆಗಳನ್ನು ಒಗೆದು ಶುಚಿಗೊಳಿಸಿ ತಕ್ಕ ಮಟ್ಟಿಗೆ ಒಣಗಿಸಿ ಪುರೈಸುವ ಸಲಕರಣೆ  (ವಾಷಿಂಗ್ ಮೆಶೀನ್). ಸ್ವಯಂಚಾಲಿತ, ಅರೆಸ್ವಯಂಚಾಲಿತ, ಮನುಷ್ಯಶಕ್ತಿಯಿಂದ ಕೆಲಸಮಾಡುವ-ಹೀಗೆ ಭಿನ್ನವರ್ಗಗಳ ಯಂತ್ರಗಳು ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಒಗೆಯುವ ಯಂತ್ರವನ್ನು ರಚಿಸಿ ಅದರ ಏಕಸ್ವವನ್ನು ಪಡೆದವ ಅಮೆರಿಕ ದೇಶದ ಹ್ಯಾಮಿಲ್ಟನ್ ಇ.ಸ್ಮಿತ್ (1858).
ಒಗೆಯುವ ಯಂತ್ರಗಳ ಉಪಗೋಗದಿಂದ ಬಟ್ಟೆಗಳು ಬಾಳಿಕೆ ಬರುವುವು. ಕಲ್ಲಿಗೆ ಒಗೆದು ಅಥವಾ ಕೋಲಿನಿಂದ ಬಡಿದು ಒಗೆಯುವಾಗ ಬಟ್ಟೆಯ ನೂಲೆಳೆಗಳು ಶಿಥಿಲಗೊಂಡು ಬಾಳಿಕೆ ಕಡಿಮೆಯಾಗುತ್ತದೆ. ಚಿಕ್ಕ ಯಂತ್ರಗಳಲ್ಲಿ ಸುಮಾರು ಕಾಲು ಅಶ್ವಸಾಮಥರ್ಯ್‌ದ ಮೋಟಾರಿನಿಂದ ತಿರುಗಿಸಲಾಗುವ ತಿರುಚಿದ ಪ್ಲಾಸ್ಟಿಕ್ ಅಲಗುಗಳುಳ್ಳ ದಂಡವಿದೆ. ಇದರಿಂದ ಸಾಬೂನಿನ ನೀರು ಚಿಮ್ಮಲ್ಪಟ್ಟು ಬಟ್ಟೆಗಳ ಸಂದಿ ಗೊಂದಿಗೂ ಪ್ರವೇಶಿಸಿ ಕೊಳೆಯನ್ನು ಹೊರತೆಗೆದು ಹಾಕಲು ಅನುಕೂಲವಾಗುತ್ತದೆ. ಕೆಲವು ಯಂತ್ರಗಳಲ್ಲಿ ಬಟ್ಟೆಯ ಪಾತ್ರೆಯನ್ನೇ ಸಾಬೂನಿನ ನೀರಿನಲ್ಲಿ ಪಕ್ಕದಿಂದ ಪಕ್ಕಕ್ಕೆ ಆಂದೋಲನ ಮಾಡುವ ಸಂವಿಧಾನವಿರುತ್ತದೆ. ನಿರ್ದಿಷ್ಟಕಾಲ ಸುಮಾರು 700 ಸೆಂ. ಉಷ್ಣತೆ ನೀರಿನಲ್ಲಿ ಆಡಿಸಿ, ಬಿಸಿನೀರಿನಲ್ಲಿ ಜಾಲಿಸಿ ಅನಂತರ ತಣ್ಣೀರಿನಲ್ಲಿ ಜಾಲಿಸಿ, ಬಟ್ಟೆಗಳನ್ನು ಹೊರತೆಗೆದು ಯಂತ್ರದ ಮೇಲ್ಭಾಗದಲ್ಲಿರುವ ಲಟ್ಟಿಣಿಗೆಗಳ (ರೋಲರ್ಸ್) ನಡುವೆ ಹಾಯಿಸಿ ಹಿಂಡಿ ತೆಗೆದು ಒಣಗಿಸಬಹುದು. ಒಮ್ಮೆಗೆ ಒಂದೇ ತರಹದ ಬಟ್ಟೆಗಳನ್ನು ಮಾತ್ರ (ದಪ್ಪವಾದ ಬಟ್ಟೆಗಳನ್ನಾಗಲಿ ತೆಳ್ಳಗಿನ ಬಟ್ಟೆಗಳನ್ನಾಗಲಿ) ಒಗೆಯಬೇಕು. ಬಣ್ಣ ಬಿಡುವ ಬಟ್ಟೆಗಳನ್ನು ಬಿಳಿಯ ಅಥವಾ ಗಟ್ಟಿಬಣ್ಣದ ಬಟ್ಟೆಗಳೊಡನೆ ಒಗೆಯಬಾರದು.
ನವೀನ ಸಮಾಜದ ಬಿರುಸಿನ ಜೀವನದಲ್ಲಿ ದೈನಂದಿನಾವಶ್ಯಕತೆಗಳನ್ನು ಪುರೈಸುವದರಲ್ಲಿ ಬಟ್ಟೆ ಒಗೆಯುವ ಯಂತ್ರದ ಪಾತ್ರ ಮಹತ್ತ್ವದ್ದೆನಿಸಿದೆ.	(ಬಿ.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ